ಜಮ್ರ್ಯಾನಿಕ್ ಭಾಷೆಗಳು -
	ಜಮ್ರ್ಯಾನಿಕ್ ಭಾಷೆಗಳು ಇಂಡೋ-ಯೂರೋಪಿಯನ್ ಭಾಷಾ ಪರಿವಾರದ ಒಂದು ಶಾಖೆಗೆ ಸೇರಿವೆ. ಈ ಶಾಖೆಯಲ್ಲಿ ಗಣನೆಯಾಗಿರುವ ಮುಖ್ಯವಾದ ಭಾಷೆಗಳು. 1961ರ ಗಣತಿಯನ್ನನುಸರಿಸಿ ಈ ಭಾಷೆಗಳನ್ನಾಡುವ ಜನರ ಸಂಖ್ಯೆ ಹೀಗಿವೆ. ಉತ್ತರ ಜಮ್ರ್ಯಾನಿಕ್ ಅಂದರೆ ಐಸ್‍ಲ್ಯಾಂಡಿಕ್ (170,000), ನಾರ್ವೀಜಿಯನ್ (40 ಲಕ್ಷ), ಡೇನಿಷ್ (50 ಲಕ್ಷ) ಮತ್ತು ಸ್ವೀಡಿಷ್ (90 ಲಕ್ಷ), ಪೂರ್ವ ಜಮ್ರ್ಯಾನಿಕ್ ಅಂದರೆ ಇಂಗ್ಲಿಷ್ (25 ಕೋಟಿ), ಫ್ರಿಸಿಯನ್ (ಉತ್ತರ ಹಾಲೆಂಡಿನ ಕೆಲವು ಭಾಗಗಳಲ್ಲಿ ಮತ್ತು ಜರ್ಮನಿಯ ವಾಯುವ್ಯ ಭಾಗದಲ್ಲಿ ವ್ಯವಹಾರದಲ್ಲಿದೆ. 460,000), ನೆದರ್‍ಲ್ಯಾಂಡಿಕ್ (ಹಾಲೆಂಡಿನಲ್ಲಿ ಇದನ್ನೇ ಡಚ್ ಎಂದೂ ಉತ್ತರ ಬೆಲ್ಜಿಯಂನಲ್ಲಿ ಫ್ಲೆಮಿಷ್ ಎಂದೂ ಕರೆಯುತ್ತಾರೆ.-170 ಲಕ್ಷ), ಆಫ್ರಿಕಾನ್ಸ್ (ನೆದರ್‍ಲ್ಯಾಂಡಿಕ್‍ನಿಂದ ಹುಟ್ಟಿ ದಕ್ಷಿಣ ಆಫ್ರಿಕದಲ್ಲಿ ಉಪಯೋಗದಲ್ಲಿದೆ-3 ಲಕ್ಷ), ಮತ್ತು ಜರ್ಮನ್ (ಜರ್ಮನಿ, ಆಸ್ಟ್ರಿಯ ಮತ್ತು ಸ್ವಿಟ್ಜರ್ಲೆಂಡಿನ ಕೆಲವು ಭಾಗಗಳಲ್ಲಿ ಬಳಕೆಯಲ್ಲಿದೆ-10 ಕೋಟಿ). ಮೂರನೆಯ ವಿಭಾಗವಾದ ಪೂರ್ವ ಜಮ್ರ್ಯಾನಿಕ್ ಇಂದು ಉಳಿದು ಬಂದಿಲ್ಲ. ಗಾತಿಕ್ ಭಾಷೆಯಿಂದ ಈ ವಿಭಾಗವಿದ್ದಿತೆಂದು ತಿಳಿದುಬರುತ್ತದೆ.

ಇತರ ಇಂಡೋಯೂರೋಪಿಯನ್ ಭಾಷೆಗಳಲ್ಲಿ ಕಾಣಬರದ, ಜಮ್ರ್ಯಾನಿಕ್ ಭಾಷೆಗಳಲ್ಲಿ ಕಂಡುಬರುವ ವಿಶೇಷ ಲಕ್ಷಣಗಳು ಹೀಗಿವೆ. (1) ಮೂಲಭಾಷೆಯ ಅಘೋಷ ಸ್ಪರ್ಶಿಗಳು ಇಲ್ಲಿ ಸಂಘರ್ಷಿಗಳಾಗಿವೆ. ಸಂಸ್ಕøತ ಭಾಷೆಯಲ್ಲುಳಿದು ಬಂದಿರುವ ಮೂಲಭಾಷೆಯ ಪ್, ತ್, ಕ್, ಕ್ವ್ ಗಳ ಸ್ಥಾನದಲ್ಲಿ ಇಂಗ್ಲಿಷ್‍ನ ಫ್, ಥ್, ಹ್, ಹ್ವ್ ಗಳು ಕಂಡುಬರುತ್ತವೆ. ಉದಾ : ಪಿತಾ=ಫಾದರ್, ತ್ರಯಃ=ತ್ರೀ, ಶತ=ಹಂಡ್ರೆಡ್, ಕದ್ (ವೇದದಲ್ಲಿ) ಹ್ವಾಟ್. (2) ಮೂಲ ಭಾಷೆಯಾದ ಇಂಡೋಯೂರೋಪಿಯನ್ನಿನ ಘೋಷಧ್ವನಿಗಳು ಕ್ರಮವಾಗಿ ಅಘೋಷ ರೂಪಗಳಲ್ಲಿ ಕಂಡುಬರುತ್ತವೆ. ಉದಾ : ಲಿತುವೇನಿಯನ್ನಿನ ದುಬಸ್‍ನಲ್ಲಿರುವ ಬ್, ಸಂಸ್ಕøತದ ದಶ, ಜನಃ ಜೀವಃಗಳಲ್ಲಿ ಕಂಡುಬರುವ ದ್, ಗ್, ಗ್ವ್, ಜಮ್ರ್ಯಾನಿಕ್ ಭಾಷೆಯಲ್ಲಿ ಪ್, ತ್, ಕ್, ಕ್ವ್ ಆಗಿವೆ. ಇಂಗ್ಲಿಷಿನ ಡೀಪ್, ಟಿನ್, ಕಿನ್, ಕ್ವಿಕ್ ಕ್ರಮವಾಗಿ ಉದಾಹರಣೆಗಳು. (3) ಮೂಲಭಾಷೆಯ ಘೋಷ ಮಹಾಪ್ರಾಣಗಳು ಅಲ್ಪಪ್ರಾಣಗಳಾಗಿ ಅಥವಾ ಸಂಘರ್ಷಿ ಧ್ವನಿಗಳಾಗಿ ಮಾರ್ಪಟ್ಟಿವೆ. ಉದಾ : ಸಂಸ್ಕøತದ ಭರತಿ, ಧರ್ಷತಿ, ಹಂಸಃ, ಘರ್ಮಃ, ಇವುಗಳಿಗೆ ಇಂಗ್ಲಿಷಿನಲ್ಲಿ ಬೇರ್, ಡೇರ್, ಗೂಸ್ ಮತ್ತು ವಾರ್ಮ್ ಎಂದಿದೆ.

ಕ್ರಿ.ಶ.ದ ಪ್ರಾರಂಭದ ವೇಳೆಗೆ ಗ್ರೀಕ್ ಮತ್ತು ಲ್ಯಾಟಿನ್ ಬರೆಹಗಾರರ ಲೇಖನಗಳಲ್ಲಿ ಕಂಡುಬರುವ ಪದಗಳು, ಹೆಸರುಗಳು, ಜಮ್ರ್ಯಾನಿಕ್ ಭಾಷೆಯ ಅತಿ ಮೊದಲಿನ ಗ್ರಂಥಸ್ಥ ರೂಪವೆನ್ನಬಹುದು. ಈ ಕಾಲದ ವೇಳೆಗೆ ಜಮ್ರ್ಯಾನಿಕ್ ಭಾಷೆಯನ್ನಾಡುವವರು ದಕ್ಷಿಣ ಸ್ಕ್ಯಾಂಡಿನೇವಿಯ, ಉತ್ತರ ಮತ್ತು ಮಧ್ಯಯೂರೋಪಿನ ಹೆಚ್ಚು ಭಾಗಗಳಲ್ಲಿ, ಪಶ್ಚಿಮದಲ್ಲಿ ರೈನ್ ನದಿಯಿಂದ ಪ್ರಾರಂಭಿಸಿ ಪೂರ್ವದಲ್ಲಿ ವಿಸ್ತರವರೆಗಿನ ಭೂಭಾಗದಲ್ಲಿ ವಾಸಿಸುತ್ತಿದ್ದರು. ಕಪ್ಪು ಸಮುದ್ರದ ದಕ್ಷಿಣಕ್ಕೆ ಗಾತ್ ಜನ ವಲಸೆ ಹೋದಮೇಲೆ ಕ್ರಿ.ಶ. 350ರ ಸುಮಾರಿನಲ್ಲಿ ಬರೆಯಲ್ಪಟ್ಟ ಬೈಬಲ್ಲಿನ ಗಾತಿಕ್ ಭಾಷೆಯ ಅನುವಾದವೇ ಜಮ್ರ್ಯಾನಿಕ್ ಭಾಷೆಗಳಲ್ಲಿ ಲಬ್ಧವಾಗಿರುವ ವಿಸ್ತøತ ಮತ್ತು ಪ್ರಾಚೀನ ಗ್ರಂಥವೆನ್ನಬಹುದು. ಈ ಶತಮಾನದ ಅಂತ್ಯದ ವೇಳೆಗೆ ಈ ಜನರ ಮಹಾವಲಸೆ ಪ್ರಾರಂಭವಾಗಿ ಜಮ್ರ್ಯಾನಿಕ್ ಭಾಷೆಯನ್ನಾಡುವ ಆಂಗ್ಲ, ಸ್ಯಾಕ್ಸನ್ ಜೂಟ್ ಮೊದಲಾದವರು ಇಂಗ್ಲೆಂಡ್ ದೇಶವನ್ನೂ ಫ್ರ್ಯಾಂಕರು ಉತ್ತರ ಫ್ರಾನ್ಸನ್ನೂ ಅಲೆಮಾನಿಯನ್ನರು, ಬವೇರಿಯನ್ನರು, ಲಾಂಗೋಬಾರ್ಡರು, ದಕ್ಷಿಣ ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯ ಮತ್ತು ಸ್ಪೇನನ್ನೂ ಆಕ್ರಮಿಸಿಕೊಂಡರು. ಏಳನೆಯ ಶತಮಾನದ ಆದಿಭಾಗದ ಹಾಗು ಎಂಟನೆಯ ಶತಮಾನದ ಮಧ್ಯಭಾಗದ ಗ್ರಂಥಗಳೇ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿನ ಅತಿ ಪ್ರಾಚೀನ ಗ್ರಂಥಗಳೆನ್ನಬಹುದು. ಜಮ್ರ್ಯಾನಿಕ್ ಶಾಖೆಯ ಇತರ ಭಾಷೆಗಳಲ್ಲಿನ ಗ್ರಂಥಗಳು ಇನ್ನೂ ಈಚಿನವು.

ಹೆಚ್ಚು ಸಂಖ್ಯೆಯಲ್ಲಿ ಇಂದು ಮಾತನಾಡಲ್ಪಡುತ್ತಿರುವ ಜಮ್ರ್ಯಾನಿಕ್ ಭಾಷೆಗಳೆಂದರೆ ಇಂಗ್ಲಿಷ್ (ನೋಡಿ- ಇಂಗ್ಲಿಷ್-ಭಾಷೆ) ಮತ್ತು ಜರ್ಮನ್ (ನೋಡಿ- ಜರ್ಮನ್-ಭಾಷೆ). ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್, ಪ್ರಪಂಚದ ಹಲವು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, (ಫ್ರೆಂಚ್ ಜೊತೆಗೆ) ಕೆನಡದಲ್ಲಿ, ಆಸ್ಟ್ರೇಲಿಯ, ನ್ಯೂಜಿûೀಲೆಂಡ್‍ಗಳಲ್ಲಿ (ಆಫ್ರಿಕಾನ್ಸ್ ಜೊತೆಗೆ) ದಕ್ಷಿಣ ಆಫ್ರಿಕದಲ್ಲಿ ಕೂಡ ವ್ಯವಹಾರ ಭಾಷೆಯಾಗಿ ಬಳಕೆಯಲ್ಲಿದೆ.						(ಡಬ್ಲ್ಯೂ.ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ